ಪಾಲಾರ್ 
ದಕ್ಷಿಣ ಭಾರತದ ಮಧ್ಯದ ದ್ರೋಣಿ ಪ್ರದೇಶದ ನದಿಗಳಲ್ಲಿ ಒಂದು. ಇದು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಚಿಂತಾಮಣಿಗೆ ನೈಋತ್ಯದಲ್ಲಿ ನಂದೀದುರ್ಗದ ಸಮೀಪದಲ್ಲಿ ಸಮುದ್ರಮಟ್ಟದಿಂದ 1.332 ಮೀ. ಎತ್ತರದಲ್ಲಿ ಪೊನ್ನೈಯಾರ್ ನದಿಯ ಉಗಮದ ಬಳಿ ಹುಟ್ಟಿ, ಆಗ್ನೇಯಾಭಿಮುಖವಾಗಿ ಹರಿದು ಆಂಧ್ರ ಪ್ರದೇಶವನ್ನು ದಾಟಿ ತಮಿಳುನಾಡಿನ ವಾಣಿಯಂಬಾಡಿ ಕಾಂಜೀವರಂ ಮತ್ತು ಚೆಂಗಲ್ಪಟ್‍ಗಳ ಮೂಲಕ ಹರಿದು ಪೂರ್ವದ ಕೋರಮಂಡಲ ತೀರದಲ್ಲಿ ಮಹಾಬಲಿಪುರಮ್‍ಗೆ ದಕ್ಷಿಣಕ್ಕೆ ಸುಮಾರು 18 ಕಿ.ಮೀ. ದೂರದಲ್ಲಿ ಬಂಗಾಲಕೊಲ್ಲಿಯನ್ನು ಸೇರುತ್ತದೆ. ಇದರ ಒಟ್ಟು ಉದ್ದ 368 ಕಿ.ಮೀ. ಇದು ತಮಿಳುನಾಡಿನಲ್ಲಿ ಸುಮಾರು 293 ಕಿ.ಮೀ. ಹರಿಯುತ್ತದೆ. ಇದರ ಜಲಾಯನ ಪ್ರದೇಶ ಸುಮಾರು 17,870 ಚ.ಕಿ.ಮೀ. ಇದರ ಉಪನದಿಗಳು ನಾಲ್ಕು. ಅವುಗಳಲ್ಲಿ ಪೊನ್ನೈ, ಚಯ್ಯಾರ್ ಮುಖ್ಯವಾದವು.

ಪಾಲಾರ್ ನದಿಯಲ್ಲಿ ನೀರಿನ ಪ್ರವಾಹ ಒಂದೇ ಸಮನಾಗಿರುವುದಿಲ್ಲ. ವರ್ಷದಿಂದ ವರ್ಷಕ್ಕೆ ಇದು ವ್ಯತ್ಯಾಸವಾಗುತ್ತದೆ. ಸಾಮಾನ್ಯವಾಗಿ ಇದರಲ್ಲಿ ಆರು ತಿಂಗಳುಗಳ ಕಾಲ ಪ್ರವಾಹ ಇರುತ್ತದೆ. ಪಾಲಾರ್ ಮತ್ತು ಇದರ ಉಪನದಿಗಳಿಗೆ ಅನೇಕ ಕಡೆ ಅಣೆಕಟ್ಟುಗಳನ್ನು ಕಟ್ಟಿದ್ದಾರೆ. ತಮಿಳುನಾಡಿನ ಚೆಂಗಲ್ಪಟ್ ಮತ್ತು ಉತ್ತರ ಆರ್ಕಾಟ್ ಜಿಲ್ಲೆಗಳಲ್ಲಿ ನೀರಾವರಿಗೆ ಇದನ್ನು ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ವೆಲ್ಲೂರಿಗೆ 25 ಕಿ.ಮೀ. ದೂರದಲ್ಲಿರುವ ಆಣೆಕಟ್ಟು ದೊಡ್ಡದು. ಇದು ಸುಮಾರು 33.600 ಹೆಕ್ಟೇರುಗಳಿಗೇ ನೀರಾವರಿ ಸೌಲಭ್ಯ ಒದಗಿಸುತ್ತದೆ. ಈ ನದಿಯ ದಡದಲ್ಲಿರುವ ದೊಡ್ಡ ಪಟ್ಟಣಗಳು ವೆಲ್ಲೂರು, ಆರ್ಕಾಟ್ ಮತ್ತು ಚೆಂಗಲ್ಪಟ್.								(ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ